ಬೆಕೆಸಿ, ಜಾರ್ಜ್ ಫಾನ್
1899-1972. ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ಭೌತವಿಜ್ಞಾನಿ ಹಾಗೂ ದೇಹಕಾರ್ಯವಿಜ್ಞಾನಿ.  ಕಿವಿಯಲ್ಲಿ ಶಬ್ದ ವಿಶ್ಲೇಷಣೆ ಆಗುವ ವಿಧಾನವನ್ನು ನೂತನ ರೀತಿಯಲ್ಲಿ ಪ್ರತಿಪಾದಿಸಿ ಸಾಕ್ಷ್ಯ ಒದಗಿಸಿ ನೂತನ ವ್ಯಾಸಂಗ ಹಾಗೂ ಶಸ್ತ್ರಕ್ರಿಯಾ ವಿಧಾನಗಳನ್ನು ಉಪಜ್ಜಿಸಿದ್ದಕ್ಕಾಗಿ ಇವನಿಗೆ ದೇಹಾಕಾರ್ಯವಿನ ಹಾಗೂ ವೈದ್ಯಕ್ಕೆ ಮೀಸಲಾದ ನೊಬೆಲ್ ಪಾರಿತೋಷಿಕ 1961ರಲ್ಲಿ ನೀಡಲ್ಪಟ್ಟಿತು.  ಹಂಗೇರಿಯ ಬೂಡಪೆಸ್ಟಿನಲ್ಲಿ 1899 ಜೂನ್ 3ರಂದು ಜನನ.  1923ರಲ್ಲಿ ಅದೇ ವಿಶ್ವವಿದ್ಯಾಲಯದ ಪಿ.ಎಚ್.ಡಿ. ಡಿಗ್ರಿ ಪಡೆದು ಹಂಗೇರಿಯ ದೂರವಾಣಿ ಸಂಸ್ಥೆಯ ಸಂಶೋಧನ ವಿಭಾಗದ ನಿರ್ದೇಶಕನಾಗಿ 1923ರಿಂದ 1946ರ ತನಕ ಕೆಲಸ ಮಾಡಿದ.  ಮೂಲತಃ ಭೌತ ವಿಜ್ಞಾನಿಯಾಗಿದ್ದು ಅತಿ ದೂರದ ಸಂಪರ್ಕ ವಿಧಾನಗಳ ವ್ಯಾಸಂಗದಲ್ಲಿ ಆಸಕ್ತನಾಗಿದ್ದ.  ಇವನಿಗೆ ಕಿವಿಯಲ್ಲಿ ಶ್ರವಣಸಾಮಥ್ರ್ಯದ ಸೂಕ್ಷ್ಮತೆ ಅತ್ಯಾಶ್ಚರ್ಯಕರವಾಗಿರುವುದು ಮನದಟ್ಟಾಗಿ ಆ ವಿಷಯದ ವ್ಯಾಸಂಗಕ್ಕೆ ಜಾರಿದ.  

	1946-47ರಲ್ಲಿ ಸ್ಟಾಕ್ಹೋಮಿನ ಕುಂಗ್ಲಿಗ್ ಕ್ಯಾರೊಲಿನ್‍ಸ್ಕ ಸಂಸ್ಥೆಯಲ್ಲಿಯೂ 1947ರಿಂದ 1966ರ ತನಕ ಹಾರ್ವರ್ಡ್ ವೈದ್ಯವಿದ್ಯಾಸಂಸ್ಥೆಯಲ್ಲಿಯೂ ವೃತ್ತಿ ನಿರತನಾಗಿದ್ದಾಗ ಬೆಕೆಸಿ ಇದೇ ವಿಷಯದಲ್ಲಿ ಪ್ರಾಯೋಗಿಕ ವ್ಯಾಸಂಗ ಮುಂದುವರಿಸಿದ.  ಒಳಗಿವಿಯ ಶ್ರವಣ ವಿಭಾಗವಾದ ಕಾಕ್ಲಿಯದ ಚಲನಲನಗಳನ್ನು ನಿರೂಪಿಸುವ ಎರಡು ಬಗೆಯ ಪ್ರತಿರೂಪಗಳನ್ನು (ಮಾಡಲ್ಸ್) ಸೃಷ್ಟಿಸಿದ.  ಇದರಿಂದ ಶ್ರವಣಕ್ರಿಯೆಯ ಕ್ರಿಯಾತಂತ್ರ, ವಿವಿಧ ರೀತಿಯ ಬಧಿರತೆಗಳ ವಿಂಗಡಣೆ ಮತ್ತು ಅವುಗಳಿಗೆ ಯುಕ್ತ ಉಪಕರಣಗಳನ್ನು ಅಳವಡಿಸುವಿಕೆ ಇವುಗಳ ವ್ಯಾಸಂಗಕ್ಕೆ ಅನುಕೂಲವಾಯಿತು. 

	ಶಬ್ದತರಂಗಗಳು ಕಿವಿಯ ತಮಟೆಯನ್ನು (ಇಯರ್‍ಡ್ರಮ್) ಘಟ್ಟಿಸಿದಾಗ ಉದ್ಭವಿಸುವ ಕಂಪನಗಳು ಒಳಗಿವಿಗೆ ತಲಪಿ ಅಲ್ಲೆ ಬೇಸಿಲರ್ ಪ್ರೆರೆಯಲ್ಲಿ ಅನುರೂಪ ಕಂಪನ ಉಂಟು ಮಾಡುತ್ತವೆ.  ಮೂಲ ಶಬ್ದದ ಲಕ್ಷಣ ಅನುಸರಿಸಿ ಈ ಪ್ರೆರೆಯ ನಿರ್ದಿಷ್ಟ ಸ್ಥಾನದಲ್ಲಿ ಕಂಪನ ಉಂಟಾಗುತ್ತದೆ ಎಂಬ ಸಂಗತಿಯನ್ನೂ ಇದಕ್ಕೆ ಕಾರಣ ಏನೆಂಬುದನ್ನೂ ಮುಂಚೆಯೇ ಹೆಲ್ಮ್ ಹೋಲ್ಟ್ಸ್ ಮುಂತಾದವರು ಪ್ರತಿಪಾದಿಸಿದ್ದರು.  ಈ ಪ್ರತಿಪಾದನೆಯಲ್ಲಿ ಕೆಲವು ಅಂಶಗಳ ಸ್ಪಷ್ಟೀಕರಣ ಸುಲಭ ಸಾಧ್ಯವಿರಲಿಲ್ಲ.  ಬೆಕೆಸಿಯ ಪ್ರತಿರೂಪಗಳನ್ನು ಬಳಸಿಕೊಂಡು ಪ್ರಯೋಗಗಳನ್ನು ಜರಗಿದಾಗ ಈ ಅಂಶಗಳ ಸ್ಪಷ್ಟನೆ ದೊರೆಯಿತು.  ಕಂಪನ ಬೇಸಿಲರ್ ಪೊರೆಯ ಅಡಿಯಿಂದ ಮೇಲಿನವರೆಗೆ ಒಂದು  ಅಲೆಯಂತೆ ಹಬ್ಬಿ ಹೋಗುವುದೆಂದೂ ಆ ಅಲೆಯ ಪಾರ ಬೇಸಿಲರ್ ಪ್ರೆರೆಯ ನಿರ್ದಿಷ್ಟ ಸ್ಥಳದಲ್ಲಿ ಅತ್ಯಧಿಕವಾಗಿ ಇರುವುದೆಂದೂ ಆ ಸ್ಥಳ ಮೂಲ ಶಬ್ದದ ಅಲೆಗಳ ಭೌತ ಲಕ್ಷಣಗಳಿಗೆ ಅನುಗುಣವಾಗಿರುವುದೆಂದೂ ಬೆಕೆಸಿ ಸ್ಪಷ್ಟ ಗೊಳಿಸಿದ.  ಶ್ರವಣದ ಸಾಗು ಅಲೆ ಸಿದ್ಧಾಂತ (ಟ್ರ್ಯಾವೆಲಿಂಗ್ ವೇವ್ ಥಿಯರಿ ಆಫ್ ಹಿಯರಿಂಗ್) ಎಂದು ಇದು ಪ್ರಸಿದ್ಧಿಯಾಗಿದ್ದು ಇಂದು ಹೆಚ್ಚು ಕಡಿಮೆ ಸಾರ್ವತ್ರಿಕ ಮನ್ನಣೆ ಪಡಿದಿದೆ.  
 
ಬೆಕೆಸಿ 1966ರಲ್ಲಿ ಹವಾಯಿ ವಿಶ್ವವಿದ್ಯಾಲಯದಲ್ಲಿ ಸಂವೇದನಾ ಶಾಸ್ತ್ರದ (ಸೆನ್ಸರಿ ಸೈನ್ಸಸ್) ಪ್ರಾಧ್ಯಾಪಕನಾಗಿ ಹುದ್ದೆ ಪಡೆದಿದ್ದು 1972 ಜೂನ್ 13ರಂದು ಅಲ್ಲಿಯೇ ನಿಧನನಾದ.  
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ